ಸಮೀಕ್ಷೆ ನಿರಾಕರಿಸಿದವರ ಮನೆಗೆ ಮತ್ತೊಂದು ಸುತ್ತು ಭೇಟಿ ನೀಡಿ ಸಹಿಯೊಂದಿಗಿನ ದೃಢೀಕರಣ ಪತ್ರ
ಸರಕಾರದ ಮಹತ್ವಾಕಾಂಕ್ಷಿ ಜಾತಿಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಯಿಂದ ದೂರ ಉಳಿಯುವವರಿಗೆ “ದೃಢೀಕರಣ ಪತ್ರ’ ಕಡ್ಡಾಯಗೊಳಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ. ಜಾತಿ ಗಣತಿಯಿಂದ ದಿನದಿಂದ ದಿನಕ್ಕೆ ದೂರ ಉಳಿಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಬೆಂಗಳೂರು:- ಸರಕಾರದ ಮಹತ್ವಾಕಾಂಕ್ಷಿ ಜಾತಿಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಯಿಂದ ದೂರ ಉಳಿಯುವವರಿಗೆ “ದೃಢೀಕರಣ ಪತ್ರ’ ಕಡ್ಡಾಯಗೊಳಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ. ಜಾತಿ ಗಣತಿಯಿಂದ ದಿನದಿಂದ ದಿನಕ್ಕೆ ದೂರ ಉಳಿಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಇದರಿಂದ ಪ್ರತೀ ಮನೆಗೆ ಭೇಟಿ ನೀಡಿದ್ದರೂ ಸಮೀಕ್ಷೆ ಅಪೂರ್ಣ ಎಂದು ಬಿಂಬಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಿರಾಕರಿಸಿದವರ ಮನೆಗೆ ಮತ್ತೊಂದು ಸುತ್ತು ಗಣತಿದಾರರು ಭೇಟಿ ನೀಡಿ ಸಹಿಯೊಂದಿಗಿನ ದೃಢೀಕರಣ ಪತ್ರ ಪಡೆಯಲಿದ್ದಾರೆ.
ಈ ಮೊದಲೇ ಮಾಹಿತಿ ನೀಡಲು ನಿರಾಕರಿಸಿದಲ್ಲಿ, ಅಂತಹವರಿಂದ ಲಿಖೀತವಾಗಿ ಸ್ಪಷ್ಟೀಕರಣ ಪಡೆಯು ವಂತೆ ಗಣತಿದಾರರಿಗೆ ಸೂಚಿಸಲಾಗಿತ್ತು. ಆದರೆ ಅದು ಕಡ್ಡಾಯ ಆಗಿರಲಿಲ್ಲ. ಹಾಗಾಗಿ ಬಹುತೇಕ ಕಡೆಗಳಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುವುದರ ಜತೆಗೆ ಬರೆದುಕೊಡಲಿಕ್ಕೂ ಆಗುವುದಿಲ್ಲ ಎಂದು ಹೇಳಿದ್ದಾರೆ. ಅಂಥ ಯುಎಚ್‌ಐಡಿಗಳನ್ನು ಗಣತಿದಾರರೇ “ಡಿಲೀಟ್’ ಮಾಡಿದ್ದಾರೆ.
ಸಮೀಕ್ಷೆ ಪ್ರಕ್ರಿಯೆ ಮುಗಿದ ಬಳಿಕ ಗಣತಿದಾರರಿಗೆ ನೀಡಿದ್ದ ಯುಎಚ್‌ಐಡಿ ಪಟ್ಟಿಯೊಂದಿಗೆ ಗಣತಿಯನ್ನು ತಾಳೆ ಹಾಕಲಾಗುತ್ತದೆ. ಅದರಲ್ಲಿ ಕೈಬಿಟ್ಟ ಮನೆಗಳಿಗೆ ಪುನಃ ಭೇಟಿ ನೀಡಿ ಅವರಿಂದ ಮುಚ್ಚಳಿಕೆ ಅಥವಾ ದೃಢೀಕರಣ ಪತ್ರ ಪಡೆಯಲಾಗುವುದು. ಇದರಿಂದ ಸಮೀಕ್ಷೆ ನೂರಕ್ಕೆ ನೂರರಷ್ಟು ಆದಂತಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ನಿಮ್ಮ ಪ್ರತಿಕ್ರಿಯೆ ಏನು?









