ಹಿಟ್ ಲಿಸ್ಟ್ ನಲ್ಲಿ ಇರುವ ಕೆಲವರು ಪಟ್ಟ ಗಟ್ಟಿ ಮಾಡಿಕೊಳ್ಳುವ ತವಕದಲ್ಲಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಸುಳಿವು ನೀಡಿದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕಾಗ್ರೆಸ್‌ನಲ್ಲೀಗ ಸಂಪುಟ ಪುನಾರಚನೆಯದ್ದೇ ಕನವರಿಕೆ. ಸಂಪುಟದ ಒಳಗಿರುವವರು ಹೊರಬರುವ ಮಾತುಗಳನ್ನಾಡುತ್ತಿದ್ದರೆ, ಹೊರಗಿರುವವರು ಒಳಪ್ರವೇಶಿಸುವ ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ಹಿಟ್ ಲಿಸ್ಟ್ ನಲ್ಲಿ ಇರುವ ಕೆಲವರು ಪಟ್ಟ ಗಟ್ಟಿ ಮಾಡಿಕೊಳ್ಳುವ ತವಕದಲ್ಲಿ

ಬೆಂಗಳೂರು ಡೆಸ್ಕ್:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಸುಳಿವು ನೀಡಿದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕಾಗ್ರೆಸ್‌ನಲ್ಲೀಗ ಸಂಪುಟ ಪುನಾರಚನೆಯದ್ದೇ ಕನವರಿಕೆ. ಸಂಪುಟದ ಒಳಗಿರುವವರು ಹೊರಬರುವ ಮಾತುಗಳನ್ನಾಡುತ್ತಿದ್ದರೆ, ಹೊರಗಿರುವವರು ಒಳಪ್ರವೇಶಿಸುವ ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹೊತ್ತಿನಲ್ಲೇ ಸಂಪುಟ ಪುನಾರಚನೆಯ ಬಿಸಿಬಿಸಿ ಚರ್ಚೆ ಶುರುವಾಗಿದ್ದು ಕೈ ಪಾಳಯದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಹೇಳಿಕೆ-ಪ್ರತಿ ಹೇಳಿಕೆಗಳಿಗೆ ವೇದಿಕೆ ದೊರೆತಂತಾಗಿದ್ದು ಬಿಹಾರ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣ ಮತ್ತೊಂದು ಮಗ್ಗಲಿಗೆ ಹೊರಳುವುದಂತೂ ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಸಂಪುಟ ಪುನಾರಚನೆ ಆಗಿಯೇ ಆಗುತ್ತದೆ ಎನ್ನುವ ದೃಢನಂಬಿಕೆಯಲ್ಲಿ ಒಂದು ಬಣವಿದ್ದರೆ, ನಾಯಕತ್ವ ಬದಲಾವಣೆ ಆಗುವ ನಿರೀಕ್ಷೆಯಲ್ಲಿ ಮತ್ತೊಂದು ಬಣವಿದೆ. ಎರಡರ ನಡುವೆ ತಟಸ್ಥರಾಗಿರುವ ಮತ್ತೊಂದಿಷ್ಟು ಮಂದಿ, ನಾಯಕ ಯಾರಾದರೇನು? ಪಟ್ಟ ಗಟ್ಟಿಯಾದರೆ ಸಾಕು ಎನ್ನುವವರೂ ಇದ್ದಾರೆ. ಏತನ್ಮಧ್ಯೆ, ಮಂತ್ರಿಗಿರಿಯ ಮೇಲೆ ತೂಗುಗತ್ತಿ ನೇತಾಡುವ ಆತಂಕವೂ ಕೆಲವರನ್ನು ಆವರಿಸಿದೆ.

ಒಟ್ಟಾರೆ ಆಡಳಿತ ಪಕ್ಷದಲ್ಲಿನ ಈ ಎಲ್ಲ ಬೆಳವಣಿಗೆಗಳನ್ನೂ ಮೈತ್ರಿ ಪ್ರತಿಪಕ್ಷಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್ ದೂರದಿಂದಲೇ ಗಮನಿಸುತ್ತಿದ್ದು 136 ಸ್ಥಾನ ಹೊಂದಿರುವ ಕಾಂಗ್ರೆಸ್ ತನ್ನೆದುರು ಇರುವ ಸವಾಲನ್ನು ಹೇಗೆ ಸಂಭಾಳಿಸಲಿದೆ ಎನ್ನುವುದನ್ನು ಕಾದು ನೋಡುತ್ತಿದೆ. ಗ್ಯಾರಂಟಿಯ ಭಾರ, ಅಭಿವೃದ್ಧಿಗೆ ಬೇಕಿರುವ ಹಣ ಹೊಂದಿಸುವಿಕೆಯ ಹೊಣೆಗಳ ಮಧ್ಯೆ ಸಂಪುಟ ಪುನಾರಚನೆಯ ಕಸರತ್ತು ಹೇಗಾಗಲಿದೆ ಎಂಬ ಕುತೂಹಲವೂ ಇದ್ದು, ಎಲ್ಲಕ್ಕೂ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಉತ್ತರ ಸಿಗುವ ಸಾಧ್ಯತೆಗಳಿವೆ.

ಸಚಿವರಾದ ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಹೀಗೆ ಅನೇಕರು ಮಂತ್ರಿಗಿರಿ ಬಿಟ್ಟುಕೊಡುವ ಮಾತುಗಳನ್ನು ಬಹಿರಂಗವಾಗಿಯೇ ಆಡುತ್ತಿದ್ದು ಬೇರೆಯವರಿಗೂ ಅವಕಾಶಗಳು ಸಿಗಬೇಕು ಎಂಬ ‘ತ್ಯಾಗ’ದ ಮಾತುಗಳನ್ನಾಡಿದ್ದಾರೆ.

ಎರಡೂವರೆ ವರ್ಷದಿಂದ ಅಧಿಕಾರ ಅನುಭವಿಸಿದವರು ಬಿಟ್ಟುಕೊಡಬೇಕು ಎಂಬ ಕೂಗು ಇದ್ದು ಕೆಲ ಸಚಿವರ ವಿರುದ್ಧ ಶಾಸಕರು, ಕಾರ್ಯಕರ್ತರು ದೂರುಗಳ ಸುರಿಮಳೆಯನ್ನೇ ಸುರಿಸಿದ್ದಿದೆ. ಹೈಕಮಾಂಡ್ ಮಟ್ಟದಲ್ಲೂ ಕೆಲವರನ್ನು ಕೈಬಿಡುವ ಮಾತುಕತೆಗಳು ನಡೆದಿವೆ. ಅಂತಹ ಹಿಟ್ ಲಿಸ್ಟ್ ನಲ್ಲಿ ಇರುವ ಕೆಲ ಸಚಿವರು ಪಟ್ಟ ಗಟ್ಟಿ ಮಾಡಿಕೊಳ್ಳುವ ತವಕದಲ್ಲಿ ಇದ್ದಾರೆ.

ಸಚಿವ ಸ್ಥಾನ ಕಳೆದುಕೊಂಡಿರುವ ಕೆ.ಎನ್.ರಾಜಣ್ಣ, ಮೇಲ್ಮನೆ ಸದಸ್ಯರಾಗಿರುವ ತಮ್ಮ ಪುತ್ರ ರಾಜೇಂದ್ರರಿಗೆ ಮಂತ್ರಿ ಪದವಿ ಕೊಡಿಸುವ ಅಪೇಕ್ಷೆಯಲ್ಲಿ ಇದ್ದಾರೆ ಎನ್ನಲಾಗಿದೆ. ಪದವಿ ತ್ಯಾಗ ಮಾಡುವುದಾಗಿ ಹೇಳಿರುವ ಕೆ.ಎಚ್.ಮುನಿಯಪ್ಪ, ಪುತ್ರಿ ರೂಪಕಲಾರನ್ನು ಮಂತ್ರಿ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಡಿಸೆಂಬರ್ ವೇಳೆಗೆ ಶುಕ್ರದೆಸೆ ಬರಲಿದೆ ಎನ್ನುವ ಮೂಲಕ ಲಕ್ಷ್ಮಣ ಸವದಿ ಕೂಡ ಹಕ್ಕು ಪ್ರತಿಪಾದಿಸಿದ್ದಾರೆ. ನಾನು ಮೊದಲಿನಿಂದಲೂ ಆಕಾಂಕ್ಷಿ ಎಂದಿರುವ ಅಪ್ಪಾಜಿ ನಾಡಗೌಡ, ನನ್ನ ಪ್ರಾಮಾಣಿಕತೆ ಗೌರವಿಸುವುದಿದ್ದರೆ ನಾನು ಮಂತ್ರಿಮಂಡಲದಲ್ಲಿ ಇರುತ್ತೇನೆ ಎನ್ನುವ ಒತ್ತಡ ಹೇರಿದ್ದಾರೆ. ಹೀಗೆ ಕೈ ಪಾಳೆಯದಲ್ಲಿ ಹೇಳಿಕೆಗಳ ಭರಾಟೆ ಜೋರಾಗುತ್ತಿದ್ದು, ಕಾಂಗ್ರೆಸ್ ಮನೆಯಲ್ಲಿ ‘ಕ್ರಾಂತಿ’ಯ ವ್ಯಾಖ್ಯಾನ, ವಿಶ್ಲೇಷಣೆಗಳು ಶುರುವಾಗಿವೆ. ಮೊದಲಿನಿಂದಲೂ ಬಿ.ಕೆ ಹರಿಪ್ರಸಾದ್, ಯು.ಟಿ ಖಾದರ್ ಫರೀದ್ ಸಚಿವ ಸ್ಥಾನದ ಅಗ್ರಸ್ಥಾನದಲ್ಲಿದ್ದರೆ ಬೇಳೂರು ಗೋಪಾಲಕೃಷ್ಣ, ಕೋನರೆಡ್ಡಿ ಇತರರು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow